New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಹೆಚ್ ಕೆ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

ಹೆಚ್ ಕೆ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

ಹಾಸನದ ಪ್ರತಿಷ್ಠಿತ ಸಂಸ್ಥೆಯಾದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜು, ಹಾಸನ ಇಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕ್ರಿಯೇಟಿವ್ ಗುರುದೇವೋಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಗಣನಾಥ್ ಶೆಟ್ಟಿ ಬಿ ಅವರು ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ರಾಧಾಕೃಷ್ಣನ್ ಅವರ ಸಾಧನೆ ಆದರ್ಶ ಗುಣ, ವ್ಯಕ್ತಿತ್ವ, ಶಿಕ್ಷಣದ ಪ್ರಾಮುಖ್ಯತೆ ಮತ್ತು ಮಹತ್ವ, ಶಿಕ್ಷಕರೇ ದೇಶದ ಭದ್ರ ಬುನಾದಿ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ವಿಮಲ್ ರಾಜ್ ಜಿ ಅವರು ಶಿಕ್ಷಣ ಎನ್ನುವುದು ಕಲಿತು ಕೇವಲ ಅಂಕಗಳನ್ನು ಗಳಿಸುವಂತಾಗದೆ ಜೀವನದ ನೈತಿಕ ಮಾನವೀಯ ಮೌಲ್ಯಗಳನ್ನು ಕಲಿಸುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.
ಹೆಚ್ ಕೆ ಎಸ್ ಅಂತರರಾಷ್ಟ್ರೀಯ ಶಾಲೆಯ ಪ್ರಾಂಶುಪಾಲರಾದ ಡಾ. ಗೌರಿ ಎ ಎಸ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರವೀಣ್ ಎ ಅವರು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡುತ್ತಾ ಎಲ್ಲಾ ಶಿಕ್ಷಕರಿಗೂ ಶುಭಾಶಯ ಕೋರಿದರು. ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಅವರು ಭಾರತೀಯ ಪರಂಪರೆಯಲ್ಲಿ ಗುರು ಶಿಷ್ಯರ ಸಂಬಂಧ ಅತ್ಯುತ್ತಮವಾದದ್ದು, ವಿದ್ಯಾರ್ಥಿಗಳ ಓರೆ ಕೋರೆಗಳನ್ನು ತಿದ್ದಿ ಕಲಿಸುವವ ಗುರು. ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಉದ್ದೇಶಗಳನ್ನು ತಿಳಿಸುತ್ತಾ ಅಧ್ಯಕ್ಷೀಯ ನುಡಿಗಳನ್ನಾಡಿದರು. ಉಪ ಪ್ರಾಂಶುಪಾಲರಾದ ಶ್ರೀ ಆದಿತ್ಯ ವಟಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರಿಯೇಟಿವ್ ಗುರುದೇವೋಭವ ಕಾರ್ಯಕ್ರಮದ ಪ್ರಯುಕ್ತ ಶ್ರೀ ಗಣಪತಿ ಎ ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜು (ವಿಭಜಿತ) ಹಾಸನ, ಶ್ರೀ ನವಾಜ್ ಗಣಿತ ಶಿಕ್ಷಕರು ಹೆಚ್ ಕೆ ಎಸ್ ಅಂತರರಾಷ್ಟ್ರೀಯ ಶಾಲೆ ಹಾಸನ, ಶ್ರೀಮತಿ ಅಶ್ವಿನಿ ಸಿ ಎಲ್ ವಾಣಿಜ್ಯ ವಿಭಾಗದ ಮುಖ್ಯಸ್ಥರು ಹೆಚ್ ಕೆ ಎಸ್ ಪದವಿ ಪೂರ್ವ ಕಾಲೇಜು ಹಾಸನ, ಶ್ರೀ ರಮೇಶ್ ಎಂ ಮುಖ್ಯಸ್ಥರು ಕನ್ನಡ ವಿಭಾಗ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜು ಹಾಸನ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ನಿರೂಪಿಸಿದರೆ, ಸಂಸ್ಕೃತ ಉಪನ್ಯಾಸಕರಾದ ಗಣೇಶ ಕೆ ಭಟ್ ಸ್ವಾಗತಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕರಾದ ವನ್ಯಶ್ರೀ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Share